ಪಾದ -
ನೆಟ್ಟಗೆ ನಿಂತಾಗ ಅಥವಾ ನಡೆಯುವಾಗ ದೇಹದ ತೂಕವನ್ನು ಹೊರುವ ಕಾಲಿನ ಕೆಳಭಾಗ (ಫುಟ್), ಮಾನವ ಪಾದಿಯಾಗಿ ನೆಟ್ಟಗೆ ನಡೆಯುವುದರಿಂದ ಅವನ ಪಾದ ವಿಶೇಷ ರೀತಿಯದು. ಇದನ್ನು ಹೋಲುವ ಪಾದ ಕಪಿಗಳಲ್ಲಲ್ಲದೆ ಇತರ ಪ್ರಾಣಿಗಳಲ್ಲಿಲ್ಲ. ಕಪಿಯ ಪಾದದಲ್ಲಿ ಹೆಬ್ಬೆರಳು ಕೈಯಲ್ಲಿರುವಂತೆ ಬೇರೆಯಾಗಿ ಮತ್ತು ಒಳಕ್ಕೆ ಚಾಚಿ ಇದೆ. ಇತರ ಬೆರಳುಗಳೂ ಉದ್ದವಾಗಿದ್ದು ಒಟ್ಟಿನಲ್ಲಿ ಕಪಿಯ ಪಾದ ಕೈಯಂತೆ ಮರದ ಕೊಂಬೆಗಳನ್ನು ಹಿಡಿದುಕೊಳ್ಳಬಲ್ಲದು. ಆದರೆ ಅದರ ಪಾದದಲ್ಲಿ ಕಮಾನು ಇಲ್ಲ (ಮಾನವನದರಲ್ಲಿ ಇದೆ), ಹಿಂದಕ್ಕೆ ಚಾಚಿಕೊಂಡಿರುವ ಹಿಮ್ಮಡಿಯೂ ಇಲ್ಲ. ಆದ್ದರಿಂದ ಕಪಿಯ ಪಾದ ದೇಹದ ತೂಕವನ್ನು ಸರಿಯಾಗಿ ಹೊತ್ತು ನೆಟ್ಟ ನಿಲುವನ್ನು ಸಾಧಿಸುವಂತಿಲ್ಲ. ಮಾನವ ಪಾದದಲ್ಲಿ 26 ಮೂಳೆಗಳು ಇದ್ದು ಅವು ಕೀಲುಗಳಾಗಿ ಜೋಡಣೆಗೊಂಡು ಅಸ್ಥಿಬಂಧಗಳಿಂದ ಬಿಗಿಯಲ್ಪಟ್ಟು ಪೇಶಿಕಂಡರಗಳ ಹತೋಟಿಯಲ್ಲಿವೆ. ಪಾದದ ಹಿಂದಿನ ಅರ್ಧದಲ್ಲಿ 7 ಕುರುಚಾದ ದಪ್ಪ ಮೂಳೆಗಳಿವೆ. ಅಂಗಾಲಲ್ಲಿ 5 ಉದ್ದಮೂಳೆಗಳೂ (ಸ್ಥಾಲಕ) ಬೆರಳುಗಳಲ್ಲಿ 14 ಚಿಕ್ಕಮೂಳೆಗಳೂ (ಅಂಗುಲಿ) ಇವೆ.

ಮಾನವಪಾದದ ಕ್ರಿಯೆಗಳು ಎರಡು : 1 ದೇಹವನ್ನು ಹೊರುವುದು. 2 ಚಲನೆಯಲ್ಲಿ ದೇಹವನ್ನು ಮುಂದೂಡಲು ಸನ್ನೆಯಂತೆ ಕೆಲಸ ಮಾಡುವುದು. ಪಾದದ ಕಾರ್ಯಸಾಮಥ್ರ್ಯ ಅದರ ರಚನಾಪೂರ್ಣತ್ವ, ಕೀಲುಗಳ ಸ್ಥಿರತೆ, ಕಮಾನುಗಳ ಸ್ಥಿತಿ ಸ್ಥಾಪಕತೆ ಮತ್ತು ಪೇಶಿಗಳ ಬಿಗಿತಗಳನ್ನು ಅನುಸರಿಸುತ್ತದೆ. ಇವುಗಳ ಪೈಕಿ ಯಾವುದೊಂದು ಅಸಮರ್ಪಕವಾದರೂ ಪಾದದ ಉಪಯೋಗ ಕುಂಠಿತವಾಗುವುದು. ಇವನ್ನು ಕಾಪಾಡಿ ಉತ್ತಮಪಡಿಸುವುದು ಪಾದರೋಗ ಚಿಕಿತ್ಸೆಗಳ ಮುಖ್ಯ ಉದ್ದೇಶ ಮತ್ತು ಕ್ರಮ. ಸರಿಯಾಗಿ ಹೊಂದಿಕೊಂಡು ಪಾದಕ್ಕೆ ಆಧಾರ ಕೊಡುವ ಪಾದರಕ್ಷೆಗಳು, ಆರೋಗ್ಯಕಾರಕ ಆರೈಕೆ, ತೂಕದ ಹತೋಟಿ ಮತ್ತು ಪೇಶಿಗಳನ್ನು ಬಲಪಡಿಸುವ ವ್ಯಾಯಾಮಗಳು ಅತಿಮುಖ್ಯ.

ಮಾನವಪಾದದ ಹುಟ್ಟುವಿಕಲತೆಗಳು : ಗದಾಪಾದ ಹಾಗೂ ತಟ್ಟೆಪಾದಗಳು ಅತಿಸಾಮಾನ್ಯ ವಿಕಲತೆಗಳು. ಸೊಟ್ಟಡಿ (ತಾಲಿಪ್ಸ್) ಅಥವಾ ಸೊಟ್ಟಪಾದ ಅಜನ್ಮ ಅಥವಾ ಜನ್ಮಾನಂತರದ್ದಾಗಿರಬಹುದು. ಅಜನ್ಮಸೊಟ್ಟಪಾದ ಕಾಲಿನ,  ಒಂದು ಮೂಳೆ ಇಲ್ಲದಿರುವುದರಿಂದ ಆಗಬಹುದು. ಬೆನ್ನೆಲುಬುಗಳೂ ಮಿದುಳು ಬಳ್ಳಿಯೂ ಹಿಂದೆ ಕೂಡದಿದ್ದಾಗ ಎರಡೂ ಕಡೆ ಸೊಟ್ಟಡಿಯಿರುವುದು ಹೆಚ್ಚು. ಗರ್ಭದಲ್ಲಿ ಅಸಾಮಾನ್ಯ ವಿನ್ಯಾಸ ಅಥವಾ ಗರ್ಭಸಾಗರದ ನೀರು ಸಾಲದೆ ಸ್ಥಳಸಂಕೋಚದಿಂದ ಪಾದಗಳು ಸೊಟ್ಟಗೆ ಬೆಳೆಯಬಹುದು. ಇದರ ಮೇಲೆ ಅನುವಂಶೀಯತೆಯ ಪ್ರಭಾವವಿಲ್ಲ. ಜನ್ಮಾಂತರ ಸೊಟ್ಟ ಪಾದವಾಗುವುದಕ್ಕೆ ಸಾಧಾರಣವಾಗಿ ಹದವಿಲ್ಲದ ಪೇಶಿಗಳ ಎಳೆತ ಹಾಗೂ ಭೂಮ್ಯಾಕರ್ಷಣೆ ಕಾರಣ; ಇತರ ಕಾರಣಗಳೆಂದರೆ ನರದೌರ್ಬಲ್ಯ ಇಲ್ಲವೇ ಲಕ್ವದಿಂದ ಪೇಶಿಗಳ ನಿಷ್ಕ್ರಿಯತೆ, ಮೊಟಕಾದ ಮೀನಕಂಡರದಿಂದ ಕುದುರೆಪಾದ, ಕಾಲಿನ ಪೇಶಿಗಳ ಊತ, ಬಹುಕಾಲ ಹಾಸಿಗೆ ಹಿಡಿದಿರುವುದರಿಂದ ಪೇಶಿಗಳ ನಶಿಸುವಿಕೆ. ಮುರಿದ ಕಾಲ್ಮೂಳೆಗಳು ಸರಿಯಾಗಿ ಕೂಡಿಕೊಳ್ಳದಿರುವಿಕೆ ಇತ್ಯಾದಿ.

ಸೊಟ್ಟಪಾದದ ಮುಖ್ಯ ವಿಧಗಳು ನಾಲ್ಕು : 1 ಕುದುರೆಪಾದ-ಹಿಮ್ಮಡಿಯೆತ್ತಿ ಬೆರಳುಗಳ ಮೇಲೆ ನಡೆಯುವುದು. 2 ಹಿಮ್ಮಡಿಪಾದ-ಮುಂಗಾಲು ಮೇಲಾಗಿ ಹಿಮ್ಮಡಿಯ ಮೇಲೆ ನಡೆಯುವುದು; 3 ಒಳಬಾಗಿದ ಸೊಟ್ಟಪಾದ ಪಾದದ ಮುಂಭಾಗ ಮತ್ತು ಅಂಗಾಲು ಒಳಕ್ಕೆ ತಿರುಚಿಕೊಂಡಿರುವುದು; 4 ಹೊರಬಾಗಿದ ಸೊಟ್ಟಪಾದ. ಸಾಧಾರಣವಾಗಿ ಎರಡು ವಿಧಗಳು ಸಂಮಿಶ್ರವಾದ ಸೊಟ್ಟಪಾದವಿರುತ್ತದೆ. ಒಳಬಾಗಿದ ಕುದುರೆ ಪಾದ ಹೆಚ್ಚು ಸಾಮಾನ್ಯ. ಅಜನ್ಮ ಸೊಟ್ಟಪಾದ ಸಾಧಾರಣವಾಗಿ ಎರಡೂ ಕಡೆ ಇದ್ದು ಆರೋಗ್ಯವಾದ ಚರ್ಮದ ಕೆಳಗೆ ಕೊಬ್ಬು ಸಾಕಷ್ಟಿರುತ್ತದೆ ಮತ್ತು ರಕ್ತಸಂಚಾರ ಸರಿಯಾಗಿದ್ದು ಪಾದದ ಉಷ್ಣತೆ ಹದವಾಗಿರುತ್ತದೆ; ಪೇಶಿಗಳ ರೋಗ ಇರುವುದಿಲ್ಲ ಮತ್ತು ಮೂಳೆಗಳೂ ಕುರುಚಾಗಿರುವುದಿಲ್ಲ. ಜನ್ಮಾನಂತರದ ಸೊಟ್ಟಪಾದ ಹುಟ್ಟಿದಾಗ ಇರುವುದಿಲ್ಲ. ಅನಂತರ ಕಾರಣಾಂತರದಿಂದ ಸಾಮಾನ್ಯವಾಗಿ ಒಂದು ಕಡೆ ಮಾತ್ರ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ ಚÀರ್ಮ ಅನಾರೋಗ್ಯವಾಗಿದ್ದು ಹುಣ್ಣುಗಳಿರಬಹುದು. ಚರ್ಮದ ಕೆಳೆಗೆ ಕೊಬ್ಬಿಲ್ಲದಿರುವುದರಿಂದ ಮಡಿಕೆಗಳಿರುವುದಿಲ್ಲ. ರಕ್ತಸಂಚಾರ ಸಾಲದೆ ಕಾಲು ನೀಲಿಯಾಗಿ ಉಷ್ಣತೆ ಕಡಿಮೆ ಇರುತ್ತದೆ. ಪೇಶಿಗಳು ನಶಿಸಿ ಮೂಳೆಗಳ ಬೆಳೆವಣಿಗೆ ಅತೃಪ್ತಿಕರವಾಗುತ್ತದೆ. ಅಕ್ರಮ ಬೆಳೆವಣಿಗೆಯ ವಕ್ರತೆಗಳು ಹುಟ್ಟುವಕ್ರತೆಗಳೊಡನೆ ಕೂಡಿಕೊಂಡಿರುತ್ತವೆ. ಇವು ಅಪಘಾತದಿಂದಲೂ ರೋಗದಿಂದಲೂ ಉಂಟಾಗುತ್ತವೆ. ಒಳತಿರುಗಿದ ಅಂಗಾಲು ಕೆಳಕ್ಕೆ ಮಡಚಲಾಗದ ಅತಿಬಿಗಿಯಾದ ಗದಾಪಾದವನ್ನು ಹೋಲುತ್ತದೆ. ಸಾಧಾರಣವಾಗಿ ಇದು ಮಿತಿಗೊಂಡು ಕಾಲಕ್ರಮೇಣ ತನ್ನಷ್ಟಕ್ಕೆ ತಾನೇ ಸರಿಹೋಗುವುದರಿಂದ ದೀರ್ಘ ಚಿಕಿತ್ಸೆ ಬೇಕಿಲ್ಲ.

ಕಾಯಿಗಳು (ಬನ್ಯನ್ಸ್) ಪಾದದ ಆಜನ್ಮ ವಕ್ರತೆಯಿಂದಾಗುತ್ತವೆ. ಒಳ ಹೆಬ್ಬೆರಳು ಇದ್ದಾಗ ಅದರ ಸ್ಥಾಲಕ ಹೊರಕ್ಕೆ ತಿರುಗಿ ಹೆಬ್ಬೆರಳು ಒಳಕ್ಕೆ ಚಾಚಿಕೊಂಡು ಸ್ಥಾಲಕದ ಮುಂಕೊನೆ ಮೇಲೆದ್ದು ಪಾಪಾಸಿನ ಒತ್ತಡದಿಂದ ಅದರ ಮೇಲಿನ ಚರ್ಮ ಊದಿದಪ್ಪವಾಗಿ ನೋಯುವ ಕಾಯಿಕಟ್ಟುತ್ತದೆ. ಇದಕ್ಕೆ ಉಪಶಮನ ಚಿಕಿತ್ಸೆ ಸಾಕು. ಬಾಲ್ಯದಲ್ಲಿ ಸೊಟ್ಟಪಾದದ ಶಸ್ತ್ರಚಿಕಿತ್ಸೆಯಿಂದ ಒಳ್ಳೆಯ ಸ್ಥಿರಪರಿಣಾಮ ಉಂಟಾಗುತ್ತದೆ.

ಅಂಗಾಲುನೋವು ಅಂಗಾಲಿನ ಮಾಂಸ ಭಾಗಗಳ ಊತದಿಂದಾಗುವುದು. ಹೆಚ್ಚು ಊತವಿದ್ದರೆ ಪಾದ ಊರಲಾಗುವುದಿಲ್ಲ. ಸಾಮಾನ್ಯ ಆದರೆ ಸರಿಯಾದ ಪಾದದಾರೈಕೆ ಮತ್ತು ಪಾಪಾಸುಗಳ ಸರಿಪಡಿಸುವಿಕೆಯಿಂದ ಕ್ರಮೇಣ ಗುಣಕಾಣುತ್ತದೆ. ಮೇಲೆ ಹೇಳಿದಂಥ ಕಾರಣಗಳಿಂದ ಪೊಲೀಸ್ ಪೇದೆ ಹಿಮ್ಮಡಿ ಎಂಬ ಸ್ಥಿತಿ ಹಿಮ್ಮಡಿಕಾಯಿ ಊತದಿಂದಾಗುತ್ತದೆ; ಹಾಗೂ ಇತರ ಕಾಯಿಗಳ (ಬರ್ಸೈಟ್ಸ್) ಕೆಂದೂತ ಮತ್ತು ಕಂಡರಗಳ ಕೆಂದೂತ ಆಗುತ್ತವೆ.

ದೇಹದ ಇತರ ಭಾಗಗಳನ್ನು ಕಾಡುವ ರೋಗಗಳು ಪಾದವನ್ನೂ ಕಾಡಬಹುದು. ಕೀವು ಉಂಟಾಮಾಡುವ ಕ್ರಿಮಿರೋಗಗಳು ಕ್ಷಯ ಕ್ರಿಮಿರೋಗ ಮತ್ತು ಏಡಿಗಂತಿಗಳು ಅಪರೂಪವೇನಲ್ಲ. ಪಾದದ ಕೆಲಮೂಳೆಗಳಲ್ಲಿ ಕೊಂಚ ಕಾಲ ರಕ್ತಸಂಚಾರನಿಂತರೂ ಆ ಭಾಗಗಳು ಸತ್ತು ಕ್ರಿಮಿ ಸೇರದಿದ್ದರೂ ನಶಿಸುತ್ತವೆ. ಇಂಥ ರೋಗಗಳ ಚಿಕಿತ್ಸೆಯ ಗುರಿ ನಶಿಸಿದ ಮೂಳೆ ಭಾಗಗಳಲ್ಲಿ ಹೊಸ ಮೂಳೆ ಮೊಳೆತು ವಕ್ರತೆ ಮಿತಿಗೊಳ್ಳುವಂತೆ ನೋಡಿಕೊಳ್ಳುವುದು.
(ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ